ತಿರುಮಕೂಡ್ಲು ನರಸೀಪುರ -
ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ; ಆ ತಾಲ್ಲೂಕಿನ ಕೇಂದ್ರ.  ಮೈಸೂರು. ಶ್ರೀರಂಗಪಟ್ಟಣ, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ ಮತ್ತು ನಂಜನಗೂಡು ತಾಲ್ಲೂಕುಗಳು ತಿರುಮಕೂಡ್ಲು ತಾಲ್ಲೂಕನ್ನು ಬಳಸಿವೆ.  ತಾಲ್ಲೂಕಿನ ವಿಸ್ತೀರ್ಣ 226 ಚ.ಮೈ., ಜನಸಂಖ್ಯೆ 2,78,156 (2001). ತಾಲ್ಲೂಕಿನಲ್ಲಿ ಒಟ್ಟು  5 ಹೋಬಳಿಗಳೂ (ಕಸಬಾ, ಬನ್ನೂರು, ಸೋಸಲೆ, ತಲಕಾಡು, ಮೂಗೂರು) 133 ಗ್ರಾಮಗಳೂ ಇವೆ.  1882ರ ವರೆಗೆ ಇದು ತಲಕಾಡು ತಾಲ್ಲೂಕು ಆಗಿತ್ತು.  ಆ ವರ್ಷ ಈ ತಾಲ್ಲೂಕಿಗೆ ತಿರುಮಕೂಡ್ಲು ನರಸೀಪುರ ಎಂಬ ಹೆಸರು ಕೊಡಲಾಯಿತು.  ಹಳೆಯ ಅಷ್ಟಗ್ರಾಮ ತಾಲ್ಲೂಕಿನಿಂದ ಬನ್ನೂರು ಮತ್ತು ಬೇವಿನಹಳ್ಳಿಗಳನ್ನು ಈ ತಾಲ್ಲೂಕಿಗೂ ಇಲ್ಲಿದ್ದ ತಾಯೂರು ಹೋಬಳಿಯನ್ನು ನಂಜನಗೂಡು ತಾಲ್ಲೂಕಿಗೂ ಸೇರಿಸಲಾಯಿತು.  ಈ ತಾಲ್ಲೂಕಿನಲ್ಲಿದ್ದ ಪೂರಿಗಾಲಿ ಹೋಬಳಿಯನ್ನು ಮಳವಳ್ಳಿ ತಾಲ್ಲೂಕಿಗೆ ಸೇರಿಸಿದ್ದು 1886ರಲ್ಲಿ.  ತಾಲ್ಲೂಕು ಬಹುತೇಕ ಮೈದಾನ ಪ್ರದೇಶ.  ವಿರಳವಾಗಿ ಅಲ್ಲಲ್ಲಿ ಕೆಲವು ಬೆಟ್ಟಗಳುಂಟು.  ಮಳವಳ್ಳಿಯ ಎಲ್ಲೆಯ ಬಳಿ ಇರುವ ಕುಂದೂರು ಬೆಟ್ಟ ಇವುಗಳಲ್ಲಿ ಅತ್ಯಂತ ಎತ್ತರವಾದ್ದು. 

ಕಾವೇರಿ ಮತ್ತು ಕಪಿಲಾ ಈ ತಾಲ್ಲೂಕಿನ ಮುಖ್ಯ ನದಿಗಳು.  ಕಾವೇರಿ ನದಿ ಈ ತಾಲ್ಲೂಕಿನಲ್ಲಿ ಉತ್ತರದಿಂದ ಹರಿದು ಬಂದು ಸರ್ಪದಂತೆ ಮುಂದುವರಿದು ಕೊಳ್ಳೇಗಾಲ ಎಲ್ಲೆಯಾಗಿ ಪರಿಣಮಿಸುತ್ತದೆ.  ಪಶ್ಚಿಮದಿಂದ ಕಪಿಲಾ ನದಿ ಹರಿದು ಬಂದು ತಿರುಮಕೂಡ್ಲಿನ ಬಳಿ ಕಾವೇರಿ ನದಿಯನ್ನು ಸೇರುತ್ತದೆ.  ಈ ತಾಲ್ಲೂಕಿನಲ್ಲಿ ಕಾವೇರಿ ನದಿ ತೆಟ್ಟೆಯಾದ, ಮರಳಿನಿಂದ ಕೂಡಿದ, ಅಗಲವಾದ ಪಾತ್ರದಲ್ಲಿ ಹರಿಯುತ್ತದೆ.  ಅನೇಕ ಕಡೆಗಳಲ್ಲಿ ಪ್ರವಾಹ ಕಾಲ ವಿನಾ ಉಳಿದ ಕಾಲಗಳಲ್ಲಿ ಇದನ್ನು ಹಾಯುವುದು ಸುಲಭ.  ಈ ನದಿಯ ದಡದಲ್ಲೂ ನೆರೆಯ ತಗ್ಗು ಪ್ರದೇಶಗಳಲ್ಲೂ ಕಪ್ಪು ಮಣ್ಣಿದೆ.  ಎತ್ತರದ ಪ್ರದೇಶಗಳಲ್ಲಿ , ಅದರಲ್ಲೂ ತಾಲ್ಲೂಕಿನ ಪಶ್ಚಿಮದಲ್ಲಿ ನೆಲ ಅಷ್ಟೇನೂ ಫಲವತ್ತಾಗಿಲ್ಲ.  

ಇಲ್ಲಿ ಕಾಡುಗಳು ಇಲ್ಲ.  ಬೀಳು ಜಮೀನು ಹೆಚ್ಚೇನೂ ಇಲ್ಲ.  ತಾಲ್ಲೂಕಿನ ತರಿ ವ್ಯವಸಾಯಕ್ಕೆ ಕಾವೇರಿ ನಾಲೆಗಳ ನೀರೇ ಮುಖ್ಯ ಆಧಾರ.  ರಾಮಸ್ವಾಮಿ ಅಣೆಕಟ್ಟಿನಿಂದ ಎರಡು ಕಾಲುವೆಗಳನ್ನು ತೆಗೆಯಲಾಗಿದೆ.  ಎಡದಂಡೆಯ ರಾಮಸ್ವಾಮಿ ನಾಲೆ ಬನ್ನೂರು, ಸೋಸಲೆ ಹೋಬಳಿಗಳ ಗದ್ದೆಗಳಿಗೆ ನೀರನ್ನು ಒದಗಿಸುತ್ತದೆ ; ತಲಕಾಡಿಗೆ 8 ಮೈಲಿ ದೂರದಲ್ಲಿ ಕೊನೆಗೊಳ್ಳುತ್ತದೆ.  ಬಲ ದಂಡೆಯ ರಾಜಪರಮೇಶ್ವರಿ ನಾಲೆ ತಿರುಮಕೂಡ್ಲಿನಿಂದ ಪಶ್ಚಿಮಕ್ಕಿರುವ ಪ್ರದೇಶಕ್ಕೆ ನೀರನ್ನು ಒದಗಿಸುತ್ತದೆ ; ತಲಕಾಡಿನಿಂದ  2 ಮೈಲಿ ಮೇಲಕ್ಕೆ ಹೆಮ್ಮಿಗೆಯ ಬಳಿ ಇರುವ ಮಾಧವಮಂತ್ರಿ ಅಣೆಕಟ್ಟಿನಿಂದ ನಿರ್ಮಿಸಲಾಗಿರುವ ನಾಲೆ ತಲಕಾಡಿಗೆ ಉತ್ತರದಲ್ಲಿ ಹರಿದು ಮೂರು ಶಾಖೆಗಳಾಗಿ ಒಡೆಯುತ್ತದೆ.  ಈ ತಾಲ್ಲೂಕಿನಲ್ಲಿ ಸುಮಾರು 35 ಕೆರೆಗಳು ನೀರಾವರಿಗೆ ಉಪಯುಕ್ತವಾಗಿವೆ. 

ಬತ್ತ ಈ ತಾಲ್ಲೂಕಿನ ಮುಖ್ಯ ಬೆಳೆÉ, ಇತರ ಬೆಳೆಗಳು ಜೋಳ, ರಾಗಿ, ಹತ್ತಿ, ಹರಳು ಇತ್ಯಾದಿ. 

ತಾಲ್ಲೂಕಿನಲ್ಲಿ ರೈಲು ಮಾರ್ಗವಿಲ್ಲ.  ನರಸೀಪುರದಿಂದ ಮೈಸೂರು, ಸೋಸಲೆ, ಬನ್ನೂರು, ಶ್ರೀರಂಗಪಟ್ಟಣ, ತಲಕಾಡು, ಹೊಳೆಸಾಲ್, ನಂಜನಗೂಡು, ಮೂಗೂರು, ಸಂತೆಮರಹಳ್ಳಿ, ಸೋಸಲೆ, ಶಿವನಸಮುದ್ರ, ತಲಕಾಡುಗಳಿಗೆ ರಸ್ತೆಗಳಿವೆ.  ತಿರುಮಕೂಡ್ಲು ಬಳಿ ಕಾವೇರಿ ಮತ್ತು ಕಪಿಲಾ ನದಿಗಳಿಗೂ ಬನ್ನೂರಿನ ಬಳಿ ಕಾವೇರಿಗೂ ಕಟ್ಟಿರುವ ಸೇತುವೆಗಳು ಮುಖ್ಯವಾದವು. 

ಈ ತಾಲ್ಲೂಕಿನಲ್ಲಿರುವ ಗರ್ಗೇಶ್ವರಿಯಲ್ಲಿ ಗರ್ಗೇಶ್ವರಿ ದೇವಾಲಯವೂ ಸೋಸಲೆಯಲ್ಲಿ ಜನಾರ್ಧನ, ಹೊನ್ನಾದೇವಿ ವೀರಭದ್ರ ದೇವಸ್ಥಾನಗಳೂ ತಲಕಾಡಿನ ಬಳಿಯ ಮುಡುಕುತೊರೆ ಬೆಟ್ಟದ ಮೇಲೆ ಮಲ್ಲಿಕಾರ್ಜುನ ದೇವಾಲಯವೂ ಇವೆ.  ಮುಡುಕುತೊರೆಯಲ್ಲಿ ಪ್ರತಿವರ್ಷವೂ ಒಂದು ದೊಡ್ಡ ಜಾತ್ರೆ ನಡೆಯುತ್ತದೆ.  ಕಾವೇರಿ ಕಪಿಲೆಗಳು ಸಂಗಮಿಸುವ ಸ್ಥಳವಾದ ತಿರುಮಕೂಡ್ಲಿನಲ್ಲಿ ಅಗಸ್ತ್ಯೇಶ್ವರ ದೇವಾಲಯವಿದೆ.  ಮೂಗೂರಿನಲ್ಲಿ ತಿಬ್ಬಾದೇವಿ, ದೇಸೇಶ್ವರ ದೇವಾಲಯಗಳಿವೆ.  ಮೂಗೂರಿನ ತಿಬ್ಬಾದೇವಿ ಜಾತ್ರೆ ಪ್ರಸಿದ್ಧವಾದ್ದು.  ಬನ್ನೂರಿನಲ್ಲಿ ಕೋಸಲೇಶ್ವರ, ಹನುಮಂತೇಶ್ವರ, ಜನಮೇಜಯ, ಸರೋವರಾಂಜನೇಯ ದೇವಾಲಯಗಳು ಇವೆ.  ಇಲ್ಲಿಯ ಹೇಮಾದ್ರಮ್ಮನ ಜಾತ್ರೆ ಪ್ರಸಿದ್ಧವಾದ್ದು.  ಸೋಸಲೆಯಿಂದ ಐದು ಮೈಲಿ ಉತ್ತರದಲ್ಲಿರುವ ಸೋಮನಾಥಪುರದಲ್ಲಿ ಸುಪ್ರಸಿದ್ಧ ಪ್ರಸನ್ನ ಚನ್ನಕೇಶವ ದೇವಾಲಯವುಂಟು.  ಇದು ಹೊಯ್ಸಳ ಶೈಲಿಯ ಸುಂದರ ದೇವಾಲಯ.  ಸೋಸಲೆಯಲ್ಲಿ ವ್ಯಾಸರಾಯರ ಮಠವಿದೆ.  ಕಾವೇರಿಯ ದಡದ ಮೇಲಿರುವ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳ ತಲಕಾಡು.
(ನೋಡಿ- ತಲಕಾಡು)

ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ದೊಡ್ಡ ಪಟ್ಟಣ ತಿರುಮಕೂಡ್ಲು ನರಸೀಪುರ.  ಇದು ಉ. ಅ. 12o 13' ಮತ್ತು ಪೂ. ರೇ. 76 58'  ಮೇಲೆ ಕಾವೇರಿ- ಕಪಿಲಾ ನದಿಗಳ ಸಂಗಮದ ಬಳಿ.  ಮೈಸೂರು ನಗರಕ್ಕೆ ಆಗ್ನೇಯದಲ್ಲಿ 20 ಮೈ. ದೂರದಲ್ಲಿದೆ.  ಇಲ್ಲಿಂದ ನಂಜನಗೂಡು 18 ಮೈ. ದೂರದಲ್ಲಿದೆ.  1868ರಿಂದ ಇದು ತಾಲ್ಲೂಕಿನ ಕೇಂದ್ರ .  1882ರಲ್ಲಿ ಇದರ ಹೆಸರು ತಾಲ್ಲೂಕಿಗೂ ಪ್ರಾಪ್ತವಾಯಿತು.  ಇದರ ಜನಸಂಖ್ಯೆ 9,630 (2001). 

ಕಾವೇರಿ ಮತ್ತು ಕಪಿಲಾ ನದಿಗಳು ಕಾವೇರಿಯ ತಳದಲ್ಲಿದೆಯೆನ್ನಲಾದ ಸ್ಫಟಿಕ ಸರೋವರವೂ ಕೂಡುವ (ತಿರುಮು-ಕೂಡಲು) ಸ್ಥಳಕ್ಕೆ ತಿರುಮಕೂಡ್ಲು ಎಂದು ಹೆಸರು ಬಂದಿದೆ.  ಇದರಿಂದಾಚೆಗೆ , ಕಪಿಲಾ ನದಿಯ ಬಲದಂಡೆಯಲ್ಲಿ ಮತ್ತು ಕಾವೇರಿಯ ಪಕ್ಕದಲ್ಲಿ ನರಸೀಪುರ ಪಟ್ಟಣ ಇದೆ.  ಹಾಸನ ಜಿಲ್ಲೆಯಲ್ಲಿ ಹೇಮಾವತಿಯ ದಡದಲ್ಲಿ ಇನ್ನೊಂದು ನರಸೀಪುರವಿದೆ.  ಅದನ್ನು ಹೊಳೆ ನರಸೀಪುರವೆಂದೂ ಈ ಪಟ್ಟಣವನ್ನು ತಿರುಮಕೂಡ್ಲು ನರಸೀಪುರವೆಂದೂ ಕರೆಯಲಾಗಿದೆ.  ತಿರುಮಕೂಡ್ಲನ್ನೂ ನರಸೀಪುರವನ್ನೂ ಸೇರಿಸುವ ಸೇತುವೆಯೊಂದನ್ನು ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.  ತಿರುಮಕೂಡ್ಲಿನ ಭಾಗದಿಂದ ಕಾವೇರಿಯ ಎಡದಂಡೆಗೂ ಒಂದು ಸೇತುವೆಯಿದೆ.  ಇದರಿಂದ ತಿರುಮಕೂಡ್ಲು ನರಸೀಪುರಕ್ಕೆ ಎಲ್ಲ ಋತುಗಳಲ್ಲೂ ತಾಲ್ಲೂಕಿನ ಇತರ ಭಾಗಗಳೊಂದಿಗೆ ಸಂಪರ್ಕ ಸಾಧ್ಯವಾಗಿದೆ.  ತಿರುಮಕೂಡ್ಲು ನರಸೀಪುರದಲ್ಲಿ ಪೌರಸಭೆಯೂ ಶಾಲಾ ಕಾಲೇಜುಗಳೂ ಇವೆ.  ನರಸೀಪುರದಲ್ಲಿರುವ ಗುಂಜಾ ನರಸಿಂಹ ಮತ್ತು ಮೂಲಸ್ಥಾನೇಶ್ವರ ದೇವಾಲಯಗಳೂ ತಿರುಮಕೂಡ್ಲಿನ ಅಗಸ್ತ್ಯೇಶ್ವರ ದೇವಸ್ಥಾನವೂ ಪ್ರಸಿದ್ಧವಾದವು. 										               (ಕೆ,ಎ,ಆರ್.)

ಪುರಾತತ್ವ : ನರಸೀಪುರದ ನದಿಯ ದಂಡೆಯಲ್ಲಿರುವ ಪುರಾತನ ನೆಲೆಯಲ್ಲಿ ಅನುಕ್ರಮವಾಗಿ ನವಶಿಲಾಯುಗ, ಕಬ್ಬಿಣಯುಗ ಮತ್ತು ಇತಿಹಾಸ ಯುಗದ ಪ್ರಾರಂಭದ ಹಂತಕ್ಕೆ ಸೇರುವ ಪ್ರಾಕ್ತನ ಅವಶೇಷಗಳು ಮಧ್ಯಯುಗಕ್ಕೆ ಸೇರುವ ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿ ಮತ್ತು ಆನಂದೇಶ್ವರ ದೇವಾಲಯಗಳೂ ಇರುವುದರಿಂದ ಆ ನೆಲೆಯ ಅವಿಚ್ಛಿನ್ನವಾದ ಐತಿಹಾಸಿಕತೆ ತಿಳಿದುಬರುತ್ತದೆ.  ಕಾವೇರಿಯ ನಿರಂತರವಾದ ಅನುಗ್ರಹದಿಂದ  ನಿರ್ಮಿತವಾದ ಸಾರವತ್ತಾದ ಭೂಮಿಯ ಪ್ರಯೋಜನ ಪಡೆದುಕೊಂಡ ಜನ ಆದಿ ಕಾಲದಿಂದಲೂ ಅಲ್ಲಿ ನೆಲಸಿ ಪ್ರಗತಿ ಸಾಧಿಸಿದ್ದು ಪುರಾತತ್ವ ಅನ್ವೇಷಣೆಗಳಿಂದ ಬೆಳಕಿಗೆ ಬಂದಿದೆ. 

ರಾಬರ್ಟ್ ಬ್ರೂಸ್‍ಪುಟ್ 19ನೆಯ ಶತಮಾನದ ಉತ್ತರಾರ್ಧದಲ್ಲಿ ಮೊಟ್ಟ ಮೊದಲಾಗಿ ಕಂಡುಹಿಡಿದ ಈ ಪ್ರಾಕ್ತನ ನೆಲೆಯಲ್ಲಿ ಎಂ, ಶೇಷಾದ್ರಿಯವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಸಂಶೋಧನ ಇಲಾಖೆಯವರು 1959ರಿಂದ 1965ರ ವರೆಗೆ 6 ವರ್ಷಗಳ ಕಾಲ ಉತ್ಖನನ ನಡೆಸಿದರು.  ಅದರ ಫಲವಾಗಿ ಕ್ರಿ.ಪೂ. 2000 ವರ್ಷಗಳಷ್ಟು ಹಿಂದೆ ಈ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ನವಶಿಲಾಯುಗ ಸಂಸ್ಕøತಿಯಿಂದ ಆರಂಭಿಸಿ ಕ್ರಿ. ಶ. 200-300 ರ ವರೆಗಾದರೂ ಜನವಸತಿ ಇದ್ದ ವಿಷಯ ತಿಳಿದುಬರುತ್ತದೆ. 

ನವಶಿಲಾಯುಗ ಕಾಲದ ಜನರ ಮುಖ್ಯ ಕಸಬು ಪಶುಸಂಗೋಪನೆಯಾಗಿತ್ತು.  ಅದರೊಂದಿಗೆ ಪ್ರಾರಂಭ ಹಂತದ ಬೇಸಾಯದ ವಿಧಾನಗಳನ್ನು ಅವರು ರೂಢಿಸಿಕೊಂಡಿದ್ದರು.  ಭೂಮಿಯನ್ನು ಅಗೆದು ಧಾನ್ಯಗಳನ್ನು ಬಿತ್ತಿ ಕಲ್ಲಿನ ಹಲ್ಲುಗಳಿದ್ದ ಕುಡುಗೋಲುಗಳಿಂದ ಬೆಳೆಗಳನ್ನು ಕೊಯ್ಲು ಮಾಡುತ್ತಿದ್ದರು.  ಇವರು ಬೀಸುವ ಕಲ್ಲುಗಳಿಂದ ಧಾನ್ಯಗಳನ್ನು ಅರೆದು ರೊಟ್ಟಿಗಳನ್ನು ಮಾಡಿ ತಿನ್ನುತ್ತಿದ್ದರೆಂದು ತಿಳಿದುಬರುತ್ತದೆ.  ಆ ಜನರು ಬೇಟೆ, ಮೀನು ಹಿಡಿಯುವುದು ಮುಂತಾದ ವೃತ್ತಿಗಳಿಂದ ತಮ್ಮ ಆಹಾರವನ್ನು ಒದಗಿಸಿಕೊಳ್ಳುತ್ತಿದ್ದರು.  ಇತರ ಪ್ರದೇಶಗಳಲ್ಲಿ ಗುಹೆ ಮತ್ತು ಗುಹಾಮುಖಗಳಲ್ಲಿ ವಾಸ ಮಾಡುತ್ತಿದ್ದರೂ ಗುಹೆಗಳಿಲ್ಲದ ಈ ಪ್ರದೇಶದಲ್ಲಿ ಅವರು ಹುಲ್ಲುಗುಡುಸಲುಗಳಲ್ಲಿ ವಾಸಿಸುತ್ತಿದ್ದರೆಂದು ಕಾಣುತ್ತದೆ.  ತಮ್ಮ ವಿವಿಧ ವೃತ್ತಿಗಳಿಗೆ ನಯಗೊಳಿಸಿದ ಕಲ್ಲಿನ ಕೊಡಲಿ, ಬಾಚಿ, ಚಕ್ಕೆ ಕಲ್ಲಿನ ಚಾಕು, ಹೆರೆಯುವ ಆಯುಧ, ಮುಂತಾದವನ್ನು ಬಳಸುತ್ತಿದ್ದರು.  ಹೊಳಪುಗೊಳಿಸಿದ ಹೊರಮೈಯುಳ್ಳ ಬೂದು ಬಣ್ಣದ ಮಡಕೆ ಕುಡಿಕೆಗಳನ್ನು ಕೈಯಿಂದ ರೂಪಿಸಿ ಬಳಸುತ್ತಿದ್ದರು.  ಅವುಗಳ ಅಂಚುಗಳನ್ನು ಕೆಮ್ಮಣ್ಣಿನಿಂದ ಚಿತ್ರಿಸಿರಲಾಗುತ್ತಿತ್ತು.  ಉತ್ಖನನದಲ್ಲಿ ಒಂದು ಚಿನ್ನದ ಮಣಿ  ದೊರಕಿರುವುದರಿಂದ ಚಿನ್ನದ ಬಳಕೆ ಅವರಿಗೆ ತಿಳಿದಿತ್ತೆಂದು ಹೇಳಬಹುದು.  ಮೃತರ ದೇಹಗಳನ್ನು ನೆಲದಲ್ಲಿ ಅಗೆದು ಗುಂಡಿಗಳಲ್ಲಿ ಕೆಲವು ಮಡಕೆ ಕಲ್ಲಿನ ಆಯುಧೋಪಕರಣಗಳೊಂದಿಗೆ ಹುಗಿಯುತ್ತಿದ್ದರು.  ಆ ಸಂಸ್ಕøತಿಯ ಅಂತ್ಯಕಾಲದಲ್ಲಿ (ಕ್ರಿ . ಪೂ. ಸು. 1000) ದಖನ್ ಪ್ರದೇಶದಿಂದ ತಾಮ್ರ - ಶಿಲಾಯುಗ ಸಂಸ್ಕøತಿಯ ಪ್ರಭಾವಗಳು ಅದರ ಮೇಲೆ ಉಂಟಾದ್ದರೆ ಫಲವಾಗಿ ಕುಂಬಾರ ಚಕ್ರದ ಮೇಲೆ ತಯಾರಿಸಿದ ಮಡಕೆಗಳು (ಅವುಗಳಲ್ಲಿ ಕೆಲವು ಬಣ್ಣಗಳಿಂದ ಅಲಂಕೃತವಾದವು) ವಿರಳವಾದರೂ ತಾಮ್ರದ ವಸ್ತುಗಳ ಸೂಕ್ಷ್ಮ ಶಿಲಾಯುಧಗಳು -ಇವುಗಳು ಬಳಕೆ ಕಂಡುಬರುತ್ತದೆ. 

ಕಬ್ಬಿಣ ಯುಗದ ಸಂಸ್ಕøತಿಯ ಕಾಲದಲ್ಲಿ ದಕ್ಷಿಣ ಭಾರತಾದ್ಯಂಥ ಪ್ರಸಾರದಲ್ಲಿದ್ದ ಶಿಲಾ ಸಮಾಧಿ ಸಂಸ್ಕøತಿಯ ಕುರುಹುಗಳು ಇಲ್ಲಿ ಕಾಣಬರುತ್ತವೆ.  ಕ್ರಿ . ಪೂ. 800 ರ ಸುಮಾರಿಗೆ ಪ್ರಾರಂಭವಾಗುವ ಈ ಸಂಸ್ಕøತಿಗೆ ಸೇರಿದ ಸಮಾಧಿಗಳು ಈ ನೆಲೆಯಲ್ಲಿ ಇಲ್ಲವಾದರೂ ಆ ಸಂಸ್ಕøತಿಯ ಮುಖ್ಯ ಲಕ್ಷಣಗಳಾದ ಕಪ್ಪು ಕೆಂಪು ಬಣ್ಣದ ನಯವಾದ ಮಡಕೆಗಳ, ಕಬ್ಬಿಣದ ಆಯುಧೋಪಕರಣಗಳ ಬಳಕೆ ಪ್ರಧಾನವಾಗಿರುವುದರಿಂದ ಆ ಸಂಸ್ಕøತಿಯ ಅಸ್ತಿತ್ವವನ್ನು ಒಪ್ಪಬೇಕಾಗುತ್ತದೆ.  ಆ ಕಾಲದಲ್ಲಿ ವಿವಿಧ ಕಸಬುಗಳ ತಾಂತ್ರಿಕ ವಿಧಾನಗಳಲ್ಲಿ ಅದರಲ್ಲೂ ಬೇಸಾಯ ಪದ್ಧತಿಯಲ್ಲಿ, ಸುಧಾರಣೆಗಳುಂಟಾಗಿ ಜನರು ನೇಗಿಲನ್ನು ಉಪಯೋಗಿಸಲಾರಂಭಿಸಿದರೆಂದು ತಿಳಿದು ಬರುತ್ತದೆ.  ಸುಟ್ಟ ಮಣ್ಣಿನ ಮತ್ತು ಉತ್ತಮ ಶಿಲೆಗಳ ಮಣಿಗಳನ್ನೂ ಗಾಜಿನ ಬಳೆಗಳನ್ನೂ ಈ ಜನರು ದೇಹಾಲಂಕಾರಕ್ಕೆ ಬಳಸುತ್ತಿದ್ದರು. 

ಇತಿಹಾಸ ಕಾಲದ ಆರಂಭದ ಕಾಲಕ್ಕೆ ಸೇರುವ ಅಲ್ಲಿಯ ಸಂಸ್ಕøತಿಯ ಕಾಲದಲ್ಲಿ (ಕ್ರಿಸ್ತಶಕದ ಮೊದಲ ಕೆಲವು ಶತಮಾನಗಳಲ್ಲಿ) ಕೆಂಪು ಬಣ್ಣದ ಹೊಳಪಾದ ಮತ್ತು ಒರಟಾದ ಮಣ್ಣಿನ ಪಾತ್ರೆಗಳು, ರೋಮನ್ ಸಂಸ್ಕøತಿಯ ಪ್ರಭಾವವನ್ನು ಸೂಚಿಸುವ ರೌಲೆಟೆಡ್ ಮಣ್ಣಿನ ಪಾತ್ರೆಗಳು, ಕೆಮ್ಮಣ್ಣಿನ ತಳ ಹದಿಯ ಮೇಲೆ ಬಿಳಿ ಸುದ್ದೆಯಿಂದ ಬಿಡಿಸಲಾದ ಅಲಂಕರಣಗಳಿಂದ ಕೂಡಿದ ಮಣ್ಣಿನ ಪಾತ್ರೆಗಳು ಬಳಕೆಗೆ ಬಂದುವು.  ಮಣ್ಣಿನ ಮತ್ತು ಹಸಿ ಇಟ್ಟಿಗೆಯ ಗೋಡೆಗಳಿದ್ದ ಮನೆಗಳಲ್ಲಿ ಈ ಜನರು ವಾಸಿಸುತ್ತಿದ್ದಿರಬೇಕು. ಉಳಿದ ಜೀವನ ವಿಧಾನಗಳಲ್ಲಿ ಹಲಕೆಲವು ಸುಧಾರಣೆಗಳಾದ್ದಿರಬಹುದಾದರೂ ಸಾಧಾರಣವಾಗಿ ಆ ಮೊದಲಿನ ಜೀವನಕ್ರಮ ಮುಂದುವರಿಯಿತೆಂದು ಭಾವಿಸಬಹುದಾಗಿದೆ. 
ಇತಿಹಾಸ ಕಾಲದಲ್ಲಿ ಮಧ್ಯಯುಗದ ಕೊನೆಯ ಭಾಗದ ವರೆಗೂ ತಿರುಮಕೂಡ್ಲು ನರಸೀಪುರದ ಬಗ್ಗೆ ಹೆಚ್ಚಿನ ಮಾಹಿತಿಗಳೇನೂ ದೊರಕುವುದಿಲ್ಲ.  ಮಧ್ಯ ಯುಗದ ಕೊನೆಗಾಲಕ್ಕೆ ನಿರ್ದೇಶಿಸಬಹುದಾದ ಕೆಲವು ದೇವಾಲಯಗಳು ಇಲ್ಲಿ ಕಂಡುಬರುತ್ತವೆ.  ಅವುಗಳಲ್ಲಿ ತಿರುಮಕೂಡ್ಲಿನ ಅಗಸ್ತ್ಯೇಶ್ವರ ಮತ್ತು ಆನಂದೇಶ್ವರ, ನರಸೀಪುರದ ಗುಂಜಾ ನರಸಿಂಹಸ್ವಾಮಿ ಗುಡಿಗಳು ಮುಖ್ಯವಾದವು. 

ತಿರುಮಕೂಡ್ಲಿನ ಅಗಸ್ತ್ಯೇಶ್ವರ ಗುಡಿ ಅನಾದಿಕಾಲದ್ದೆಂದು ಐತಿಹ್ಯವಿದೆಯಾದರೂ ಇದನ್ನು 16ನೆಯ ಶತಮಾನಕ್ಕೆ ಮೊದಲು ಕಟ್ಟಿಸಿದ್ದಿರಬೇಕೆಂಬುದಂತೂ ನಿಜ.  ಮಾಧ್ವ ಗುರು ಶ್ರೀ ವ್ಯಾಸರಾಯರು 16ನೆಯ ಶತಮಾನದಲ್ಲಿ ಸ್ಥಾಪಿಸಿದ ಹನುಮಾನ್ ವಿಗ್ರಹ ಇಲ್ಲಿರುವುದು ಇದಕ್ಕೆ ಸಾಕ್ಷಿ.  ದ್ರಾವಿಡ ಶೈಲಿಯ ಈ ದೇವಾಲಯದಲ್ಲಿ ಕೆಲವು ಸುಂದರ ಮೂರ್ತಿಶಿಲ್ಪಗಳಿವೆ.  ನವರಂಗದಲ್ಲಿರುವ  ಅಂದವಾದ ಸುಬ್ರಹ್ಮಣ್ಯ. ಸೂರ್ಯ ಮತ್ತು ಗಣೇಶ, ಪ್ರಾಕಾರದಲ್ಲಿರುವ  2 ಅಡಿ ಎತ್ತರದ, ಅಷ್ಟಬಾಹುಗಳುಳ್ಳ., ನರ್ತಿಸುತ್ತಿರುವ ಅಶ್ವತ್ಥನಾರಾಯಣ, ಟಗರಿನ ತಲೆ ಮತ್ತು ನಾಲ್ಕು ಬಾಹುಗಳುಳ್ಳ ದಕ್ಷ.  ಆಲದ ಮರದ ಅಡಿಯಲ್ಲಿ ಸಪ್ತರ್ಷಿಗಳ ಶಿಲ್ಪಗಳಿರುವ ಪೀಠದ ಮೇಲೆ ಕುಳಿತು ಧ್ಯಾನಮಗ್ನನಾದ ದಕ್ಷಿಣಾಮೂರ್ತಿ - ಈ ಶಿಲ್ಪಗಳು ಗಮನಾರ್ಹ.  ಪೂರ್ಣಮಂಗಲ ಕಾಮಾಕ್ಷಿ ಈ ಕ್ಷೇತ್ರದ ಪ್ರಧಾನ ಸ್ತ್ರೀದೇವತೆ.  ನದಿಯ ಎದುರು ದಂಡೆಯಲ್ಲಿರುವ ಆನಂದೇಶ್ವರ ದೇವಾಲಯವನ್ನು ಚಿದಾನಂದ ಅಥವಾ ಸಚ್ಚಿದಾನಂದ ಸ್ವಾಮಿ 17ನೆಯ ಶತಮಾನದಲ್ಲಿ ಕಟ್ಟಿಸಿದ್ದೆಂದು ಹೇಳಲಾಗುತ್ತದೆ. 

ದ್ರಾವಿಡ ಶೈಲಿಯಲ್ಲಿರುವ ಗುಂಜಾ ನರಸಿಂಹಸ್ವಾಮಿಯ ಗುಡಿ ಮಧ್ಯಯುಗಕ್ಕೆ ಸೇರಿದ ಕಟ್ಟಡ. 16ನೆಯ ಶತಮಾನದಲ್ಲಿ ಶಿಥಿಲವಾಗಿದ್ದಾಗ ಮೈಸೂರರ ಸರ ದಳವಾಯಿ ಅದನ್ನು ಜೀರ್ಣೋದ್ಧಾರ ಮಾಡಿಸಿದುದಾಗಿ ತಿಳಿದುಬರುತ್ತದೆ.  ಮುಖಮಂಟಪದ ಬಳಿಯಿರುವ ಬಲಿಪೀಠದ ಪಾಶ್ರ್ವದ ಎರಡು ಕಂಬಗಳ ಮೇಲಿರುವ ಮತ್ತು ಮಹಾದ್ವಾರದ ಬಳಿಯ ಇನ್ನೊಂದು ಕಂಬದ ಮೇಲಿರುವ ಅಂಜಲಿಬದ್ಧ ವ್ಯಕ್ತಿಗಳ ಶಿಲ್ಪಗಳು ದೇವಾಲಯದ ಆ ಭಾಗಗಳನ್ನು ಕಟ್ಟಿಸಿದ ಮೂಗೂರು ನಾಯಕರ ಮೂರ್ತಿಗಳೆಂದು ಹೇಳಲಾಗಿದೆ.  ದೇವಿಗುಡಿಯಲ್ಲಿರುವ ಹನುಮಂತರ ಸುಂದರಮೂರ್ತಿ, ಶ್ರೀಕೃಷ್ಣಲೀಲೆಯ ದೃಶ್ಯಗಳು, ದೇವಾಲಯದ ಅಧಿದೇವ ಶ್ರೀನರಸಿಂಹನ ವಿವಿಧ ಭಂಗಿಗಳಲ್ಲಿರುವ ಶಿಲ್ಪಗಳು ಈ ಮಂದಿರದ ಸೌಂದರ್ಯವನ್ನು ಹೆಚ್ಚಿಸಿವೆ. 			                                                                   (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ